ಕಾರ್ನೇಗಿ, ಆಂಡ್ರ್ಯೂ

 1835-1919. ಅಮೆರಿಕೆಯ ಕೈಗಾರಿಕೋದ್ಯಮಿ ಮತ್ತು ದಾನಿ. ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಅನೇಕಾನೇಕ ದತ್ತಿ ಮತ್ತು ಸಂಸ್ಥೆಗಳನ್ನು ಸ್ಥಾಪಿಸಿದವ. ಗಾಸ್ಪೆಲ್ ಆಫ್ ವೆಲ್ತ್ (1889) ಎಂಬ ತನ್ನ ಪ್ರಬಂಧವೊಂದರಲ್ಲಿ ಈತ ಶ್ರೀಮಂತನ ಜೀವನದಲ್ಲಿನ ಎರಡು ಸಂದಿಗ್ಧ ಅವಧಿಗಳನ್ನು ಹೀಗೆ ಬಣ್ಣಿಸಿದ್ದಾನೆ. ಮೊದಲನೆಯದು ಐಶ್ವರ್ಯವನ್ನು ಸಂಪಾದಿಸುವುದು. ಎರಡನೆಯದು ಗಳಿಸಿದ ಐಶ್ವರ್ಯವನ್ನು ಜನಸಾಮಾನ್ಯರ ಕಲ್ಯಾಣಕ್ಕಾಗಿ ಸದ್ವಿನಿಯೋಗ ಮಾಡುವುದು. ಈ ತತ್ತ್ವವನ್ನು ಜೀವನದಲ್ಲಿ ಸ್ವಯಂ ಅನುಷ್ಠಾನಕ್ಕೆ ತಂದವನೀತ. ಹುಟ್ಟಿದ್ದು ಸ್ಕಾಟ್ಲೆಂಡಿನ ಡನ್ಫರ್ಮ್‍ಲಿನ್‍ನಲ್ಲಿ. ತಂದೆ ನಡೆಸುತ್ತಿದ್ದ ಕೈಮಗ್ಗದ ವ್ಯಾಪಾರ ಕುಸಿದು ಬಿದ್ದುದರಿಂದ ಇಡೀ ಕುಟುಂಬವೇ 1848ರಲ್ಲಿ ಅಮೆರಿಕೆಗೆ ಬಂದು ಅಲಘನಿ ನಗರದಲ್ಲಿ ನೆಲಸಿತು. ಕಾರ್ನೇಗಿ ಅಲ್ಲಿ ಗಿರಣಿ ಕಾರ್ಖಾನೆಯಲ್ಲಿ ದಾರ ಸುತ್ತುವ ಹುಡುಗನಾಗಿ ಸೇರಿಕೊಂಡ. ಸಂಪಾದನೆ ವಾರಕ್ಕೆ 1.20 ಡಾಲರ್. ಅನಂತರ ವ್ಯಾಪಾರಿಯೊಬ್ಬನ ಬಳಿ ಗುಮಾಸ್ತನಾದ. ಪಿಟ್ಸ್‍ಬರ್ಗ್‍ನಲ್ಲಿ ತಂತಿ ಸುದ್ದಿಗಾರ ಹುಡುಗನಾಗಿ ಕೆಲಕಾಲ ಕಳೆದು ಅಲ್ಲಿಯೇ ಚಾಲಕ ಹುದ್ದೆಗೆ ತೇರ್ಗಡೆ ಹೊಂದಿದ. ಏತನ್ಮಧ್ಯೆ ಹೆಚ್ಚಿನ ಸಂಪಾದನೆಗಾಗಿ ವೃತ್ತಪತ್ರಿಕೆಯ ಸುದ್ದಿಗಾರನಾಗಿ ಕೆಲಸ ಮಾಡತೊಡಗಿದ. ಅನಂತರ ಪೆನ್‍ಸೈಲ್‍ವನಿಯ ರೇಲ್‍ರೋಡಿನ ಅಧಿಕಾರ ವರ್ಗಕ್ಕೆ ಸೇರಿ ಟೆಲಿಗ್ರಾಫಿಕ್ ಟ್ರೇನ್ ಡಿಸ್ಪ್ಯಾಚರ್ ಆಗಿ ಕೆಲಸ ನಿರ್ವಹಿಸಿದ. ಅಲ್ಲಿಯೇ ಜನರಲ್ ಸೂಪರಿನ್‍ಟೆಂಡೆಂಟ್ ಆಗಿದ್ದ ಕರ್ನಲ್ ಥಾಮಸ್ ಎ. ಸ್ಕಾಟನ ಕಾರ್ಯದರ್ಶಿಯಾದ. ಅದೇ ವೇಳೆ ವುಡ್‍ರಫ್ ಕಂಪೆನಿಯ 1/8 ಭಾಗದ ಪಾಲುದಾರನಾದ. ಅಷ್ಟರಲ್ಲಿ ಅಂತರ್ಯುದ್ಧ ತಲೆದೋರಿ ಸ್ಕಾಟ್ ಯುದ್ಧಖಾತೆಯ ಸಹಾಯಕ ಕಾರ್ಯದರ್ಶಿಯಾಗಿ ನೇಮಕಗೊಂಡ ಮೇಲೆ ಕಾರ್ನೇಗಿ ಈಶಾನ್ಯ ಭಾಗದ ಸೈನ್ಯ ಹಾಗೂ ದೂರವಾಣಿ ಮಾರ್ಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ. 1862ರಲ್ಲಿ ಮರದಿಂದ ಕಟ್ಟಿದ ಸೇತುವೆಗಳು ಪ್ರಯೋಜನಕ್ಕೆ ಬರಲಾರವೆಂದು ತಿಳಿದ ಮೇಲೆ ಕಾರ್ನೇಗಿ ಕಬ್ಬಿಣದ ಸೇತುವೆಗಳನ್ನು ಕಟ್ಟಲು ಸಿದ್ಧತೆ ಮಾಡಿಕೊಂಡ. ಇದರ ಫಲವೆಂಬಂತೆ ಪ್ರಥಮವಾಗಿ ಒಹಾಯೊ ನದಿಗೆ ಕಬ್ಬಿಣದ ಸೇತುವೆ ಹಾಕಿದ. ಸೇತುವೆ ಕಾಮಗಾರಿಕೆಗಾಗಿ ಹೆಚ್ಚಿನ ಕಬ್ಬಿಣವನ್ನು ಪಡೆಯಲು ಕಬ್ಬಿಣ ವ್ಯಾಪಾರಕ್ಕೆ ಇಳಿದು ಯೂನಿಯನ್ ಐರನ್ ಮಿಲ್ಸ್‍ನ ಸಂಸ್ಥಾಪಕನಾದ. 1868ರಲ್ಲಿ ಅದು ಅಮೆರಿಕೆಯ ಪ್ರಥಮ ಉಕ್ಕಿನ ಕಾರ್ಖಾನೆಯಾಯಿತು. ಅಲ್ಲಿಂದ 1888ರ ವೇಳೆಗೆ ಈತನ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ ನಾಲ್ಕೂ ನಿಟ್ಟಿನಲ್ಲಿ ಬಡಾಯಿಸಿತು. ಉತ್ಸಾಹಿತನಾದ ಕಾರ್ನೇಗಿ ಅನೇಕ ಕಂಪನಿಗಳನ್ನು ತೆರೆದ. 1899ರಲ್ಲಿ ಈ ಎಲ್ಲ ಕಂಪನಿಗಳನ್ನೂ ಒಂದುಗೂಡಿಸಿ ಕಾರ್ನೇಗಿ ಉಕ್ಕಿನ ಕಂಪನಿ ಎಂದು ಹೆಸರಿಟ್ಟ. 1901ರಲ್ಲಿ ಈ ವ್ಯವಹಾರದಿಂದ ನಿವೃತ್ತನಾಗಿ ಅಮೆರಿಕೆಯ ಉಕ್ಕಿನ ಮಂಡಳಿಗೆ ತನ್ನ ಕಂಪನಿಯನ್ನು 50,00,00,000 ಡಾಲರುಗಳಿಗೆ ಮಾರಿದ. ತನ್ನ ಉಳಿದ ಕಾಲವನ್ನು ದಾನಕಾರ್ಯಗಳಿಗಾಗಿ ವ್ಯಯಮಾಡಿದ. ಪ್ರಪಂಚಾದ್ಯಂತ ಗ್ರಂಥಾಲಯಗಳನ್ನು ನಿರ್ಮಿಸುವುದಲ್ಲದೆ ಇನ್ನೂ ಅನೇಕ ಉಪಯುಕ್ತ ಕಾರ್ಯಗಳನ್ನು ಮಾಡಿದ. ಈತ ಮಾಡಿದ ದಾನದ ಮೊತ್ತ 350,000,000 ಡಾಲರ್‍ಗಳಿಗೆ ಕಡಿಮೆಯಿಲ್ಲವೆಂದು ಹೇಳಲಾಗುತ್ತಿದೆ. ಕಾರ್ನೇಗಿಗೆ ಅನೇಕ ರಾಷ್ಟ್ರಗಳಿಂದ ಗೌರವ ದೊರಕಿತು. ಈತ ಬರೆದ ಗ್ರಂಥಗಳೆಂದರೆ ಟ್ರಯಂಫೆಂಟ್ ಡೆಮಾಕ್ರಸಿ (1886), ದಿ ಗಾಸ್ಪೆಲ್ ಆಫ್ ವೆಲ್ತ್ 1900), ದಿ ಎಂಪೈರ್ ಆಫ್ ಬಿಸಿನೆಸ್ (1902), ಪ್ರಾಬ್ಲಮ್ಸ್ ಆಫ್ ಟುಡೆ (1909). ಕಾರ್ನೇಗಿ ಲೆನಾಕ್ಸ್‍ನಲ್ಲಿ ಸತ್ತ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ